ಊಡಮ್  
	ಅಕ್ಯಾಂತೊಟೆರಿಜಿಯೈ ಗಣದ (ಆರ್ಡರ್) ಪರ್ಸಿಡೆ ವಂಶಕ್ಕೆ (ಫ್ಯಾಮಿಲಿ) ಸೇರಿದ ಒಂದು ಕುಲ. ಇಂಗ್ಲಿಷ್ ಹೆಸರು ಗೆರ್ರೆಸ್. ಇವು ಎಲುಬು ಮೀನುಗಳು. ಉಷ್ಣವಲಯದ ಸಮುದ್ರವಾಸಿಗಳು. ಕೆಲವು ಪ್ರಭೇದಗಳು ಸಿಹಿನೀರಿಗೆ ವಲಸೆಹೋಗುತ್ತವೆ. ಬಣ್ಣ ಬೆಳ್ಳಿಯಂತೆ. 10" ಉದ್ದ ಮೀರದ ದೇಹವನ್ನು ನಯವಾದ ಹುರುಪುಗಳು ಮುಚ್ಚಿವೆ. ಇವು ಲೋಮಾಂಗಗಳು. ಚಾಚಿಕೊಂಡಿರುವ ಬಾಯನ್ನು ಹೊರಕ್ಕೆ ಅದುಮಿದಾಗ ಜೋತುಬೀಳುತ್ತವೆ. ಹಲ್ಲುಗಳು ದುರ್ಬಲವಾಗಿವೆ. ಬಾಯ ಅಂಗುಳ ದಂತರಹಿತವಾಗಿದೆ. ಕಣ್ಣುಗಳು ದೊಡ್ಡವು. ಮೇಲುರೆಕ್ಕೆಯ ಎರಡು ಭಾಗಗಳು ಆಳವಾಗಿ ಸೀಳಿಕೊಂಡು ಬೇರೆ ಬೇರೆಯಾಗಿವೆ. ಬಾಲದ ರೆಕ್ಕೆ ಎರಡು ಕವಲಾಗಿದೆ. ಕಿವಿರು ಕವಚದ ಮುಂಭಾಗದಲ್ಲಿ ಸಾಮಾನ್ಯವಾಗಿ ಮುಳ್ಳುಗಳಿರುವುದಿಲ್ಲ. ಗೆರ್ರೆಸ್ ಕುಲದಲ್ಲಿ ಸುಮಾರು 30 ಪ್ರಬೇಧಗಳಿವೆ. ಇವುಗಳಲ್ಲೆಲ್ಲ ಸಾಧಾರಣವಾಗಿ ಒಂದೇ ರೀತಿಯ ಹೋಲಿಕೆಗಳಿರುವುದರಿಂದ ಇವನ್ನು ವರ್ಗೀಕರಿಸುವುದು ಬಲು ಕಷ್ಟ. ಗೆರ್ರೆಸ್ ಆಲ್ಟಿಸ್ಪಿನಿಸ್ ಮೀನು ಗಂಗಾನದಿಯ ಮುಖದಲ್ಲಿ ಸಿಗುತ್ತದೆ.    						
(ಎನ್.ವಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ